ಕೈಪಿಡಿ

ಕನ್ನಡ  ವ್ಯಾಕರಣ ಹಾಗು ಛಂದಸ್ಸು ಶಾಸ್ತ್ರವನ್ನು ಅಭ್ಯಸಿಸಲು ಅಭಿವೃದ್ಧಿಪಡಿಸಿರುವ ಈ ತಂತ್ರಾಂಶವನ್ನು ಉಪಯೋಗಿಸುವ ವಿಧಾನವನ್ನು ಕೆಳಗೆ ವಿವರಿಸಲಾಗಿದೆ. 

ತಂತ್ರಾಂಶವನ್ನು  ಬಳಸುವ ಮೊದಲು ಬೇಕಾದ ಪದ, ವಾಕ್ಯ ಅಥವಾ  ಚರಣವನ್ನು ಆಯ್ಕೆ ಮಾಡಿ,  ಬೇಕಾದ ಕ್ರಿಯೆಯನ್ನು (ಸಂಕೇತವನ್ನು) ಆಯ್ಕೆ ಮಾಡಿ. 

 ಸಂಧಿ:  ಎರಡು ಪದಗಳ ಸಂಧಿ  ಮಾಡಲು, ಮೊದಲಿಗೆ ಎರಡು  ಪದಗಳನ್ನು ಆಯ್ಕೆ ಮಾಡಿ ನಂತರ ಸಂಧಿ ಸಂಕೇತವನ್ನು ಒತ್ತಬೇಕು. 

ಉದಾಹರಣೆ: 

ಹಣದ + ಆಸೆ 

(ಇಲ್ಲಿ ಎರಡು ಪದಗಳ ನಡುವೆ + ಚಿಹ್ನೆ ಇರುವ ಅಗತ್ಯವಿಲ್ಲ. ಇದ್ದರೂ ತೊಂದರೆಯಿಲ್ಲ.)  ಆಯ್ಕೆ ಮಾಡಿ ಸಂಧಿ ಸಂಕೇತವನ್ನು ಒತ್ತಿದಾಗ ಕೆಳಗಿನ ಮಾಹಿತಿ ಮೂಡುವುದು

ಕನ್ನಡದಾಗಿದ್ದಲ್ಲಿ  ‘ಕನ್ನಡ’ವನ್ನು ಆಯ್ಕೆ ಮಾಡಿ.  ಯಾವುದಾದರು ಒಂದು ಪದ ಸಂಸ್ಕೃತವಾಗಿದ್ದಲ್ಲಿ ‘ಸಂಕೃತ’ವನ್ನು ಆಯ್ಕೆ  ಮಾಡಿ. 

ಕನ್ನಡ  ಸಂಧಿಯಾಗಿದ್ದಲ್ಲಿ ಲೋಪ ಮತ್ತು ಆಗಮ ಸಂಧಿಗಳ ಸಮಸ್ಯೆಯನ್ನು ಬಗೆಹರಿಸಲು ಕೆಳಗೆ ತೋರಿಸಿದ  ಮತ್ತೊಂದು ಮಾಹಿತಿ ಮೂಡುವುದು. 

ಸರಿಯಾದ ಆಯ್ಕೆ ಮಾಡಿ   ಹೌದು ಎಂದು  ಆಯ್ಕೆ ಮಾಡಿದಾಗ ‘ಹಣದಾಸೆ [ಲೋಪ ಸಂಧಿ]’ ಎಂದು ಉತ್ತರವು  ಬರುವುದು. 

 ಸೂಚನೆ  –

 ಕೆರೆ + ಅನ್ನು, ಇದನ್ನು ಸಂಧಿ ಮಾಡುವಾಗ ಕೆಳಕಂಡ ಮಾಹಿತಿ ಮೂಡುವುದು. 

ಇಲ್ಲಿ ‘ಇಲ್ಲ’ ಎಂದು ಆಯ್ಕೆ  ಮಾಡಿದಾಗ ಬೇಕಾದ ಉತ್ತರ ಸಿಗುವುದು –> ಕೆರೆಯನ್ನು [ಯ ಕಾರ ಆಗಮ  ಸಂಧಿ] 

 ವಿಸ್ತಾರ:   

ಒಂದು ಸಂಯುಕ್ತ  ಪದವನ್ನು ವಿಸ್ತರಿಸಲು,  ಪದವನ್ನು ಆಯ್ಕೆ ಮಾಡಿ ನಂತರ ‘ವಿಸ್ತಾರ’ ಎಂಬ ಸಂಕೇತವನ್ನು ಒತ್ತಬೇಕು.

 ‘ಶುಭಾಶಯ’ ಎಂಬ ಪದವನ್ನು ವಿಸ್ತರಿಸಿದಾಗ ‘ಶುಭ ಆಶಯ’ ಎಂದು ಬದಲಾಗುವುದು

ಪ್ರಸ್ತಾರ: 

ಛಂದಸ್ಸನ್ನು  ಗುರುತಿಸಲು,  ಒಂದು ಪದ್ಯದ  ಚರಣವನ್ನು ಆಯ್ಕೆ ಮಾಡಿ ‘ ಪ್ರಸ್ತಾರ  ‘  ಎಂಬ  ಸಂಕೇತವನ್ನು ಒತ್ತಬೇಕು.

ಉದಾಹರಣೆ: 

ಕುಳಿರ್ವ ಪೂಗೊಳಂಗಳಲ್ಲಿ

ತಳಿರಕಾವಣಂಗಳಲ್ಲಿ 

ತುಂಬಿವಿಂಡಿನಂತೆಪಾಡಿ 

ಜಕ್ಕವಕ್ಕಿಯಂತೆಕೂಡಿ

ಮೇಲಿನ ಚರಣವನ್ನು  ಆಯ್ಕೆ ಮಾಡಿ ‘ಪ್ರಸ್ತಾರ‘ವನ್ನು ಒತ್ತಿದಾಗ ಲಘು ಗುರು  ಹಾಗೂ ಗಣದ ಗುಂಪನ್ನು ಮಾಡಿ ಛಂದಸ್ಸನ್ನು ಗುರುತಿಸುವುದು ನಂತರ ಕೆಳಕಂಡ ವಿಶ್ಲೇಷಣೆ  ಬರುವುದು 

===============ವಿಶ್ಲೇಷಣೆ========================

[ಉತ್ಸಾಹ ರಗಳೆ]

∪ ∪ ∪ |_ ∪ |_ ∪ |_ ∪                   (12 ಮಾತ್ರೆಗಳು/9 ಅಕ್ಷರಗಳು)

ಕುಳಿರ್ವ |ಪೂಗೊ|ಳಂಗ|ಳಲ್ಲಿ

∪ ∪ ∪|_ ∪|_ ∪|_ ∪                     (12 ಮಾತ್ರೆಗಳು/9 ಅಕ್ಷರಗಳು)

ತಳಿರ|ಕಾವ|ಣಂಗ|ಳಲ್ಲಿ 

_ ∪|_ ∪|_ ∪|_ ∪                          (12 ಮಾತ್ರೆಗಳು/8 ಅಕ್ಷರಗಳು)

ತುಂಬಿ|ವಿಂಡಿ|ನಂತೆ|ಪಾಡಿ 

_ ∪|_ ∪|_ ∪|_ ∪                          (12 ಮಾತ್ರೆಗಳು/8 ಅಕ್ಷರಗಳು)

ಜಕ್ಕ|ವಕ್ಕಿ|ಯಂತೆ|ಕೂಡಿ

ಆದಿಪ್ರಾಸ : –

ಅಂತ್ಯಪ್ರಾಸ : –

==============ವಿಶ್ಲೇಷಣೆ ಮುಕ್ತಾಯ===================

ಪ್ರಾಸ:  ಪ್ರಾಸವನ್ನು  ಗುರುತಿಸಲು,  ಒಂದು ಪದ್ಯದ  ಚರಣವನ್ನು ಆಯ್ಕೆ ಮಾಡಿ ‘ ಪ್ರಾಸ‘  ಎಂಬ  ಸಂಕೇತವನ್ನು ಒತ್ತಬೇಕು. 

ಉದಾಹರಣೆ: 

ತಡದಿ ಬರುವನೇನೇ  ?  ಕೇಳದಿದ್ದಷ್ಟು  ನೀನೂ 

ಕುಡಿದುಬರುವ ಕಾಣೇ!  ಮಾತನಾಡ್ದಿದ್ರೆ ಮತ್ತೇ 

ಮಡದಿಯೆನುವುದನ್ನೇ  ಮರ್ತು ಬಿಡ್ತಾನೆ ಕೇಳೇ 

ಹೊಡೆದುಬಡೆದು ಮಾಡೀ  ಮೂಲೆಗೇ ತಳ್ಳುತಾನೇ! ||೧||  

ಮೇಲಿನ ಚರಣವನ್ನು  ಆಯ್ಕೆ ಮಾಡಿ ‘ಪ್ರಾಸ‘ವನ್ನು ಒತ್ತಿದಾಗ ಕೆಳಕಂಡ  ವಿಶ್ಲೇಷಣೆ ಬರುವುದು   ==============ವಿಶ್ಲೇಷಣೆ============================ 

ಆದಿಪ್ರಾಸ : ಡ –> ಗಜಪ್ರಾಸ 

ಅಂತ್ಯಪ್ರಾಸ : – 

==============ವಿಶ್ಲೇಷಣೆ ಮುಕ್ತಾಯ===================

ಶಿಥಿಲದ್ವಿತ್ವ ವ್ಯಂಜನಗಳ ಆಯ್ಕೆಯನ್ನು ಪ್ರಾಶಸ್ತ್ಯ ಮೂಲಕ ಬದಲಿಸಬಹುದು 

ಇದೆ ಉತ್ತರ ಪದದ ಆದ್ಯಾಕ್ಷರ ದ್ವಿತ್ವವಾಗಿದ್ದಲ್ಲಿ, ಇದು ಪೂರ್ವ ಪದದ ಅಂತ್ಯಾಕ್ಷರದ ಕಾಲ ಮಾತ್ರೆಯಲ್ಲಿ ಮಾಡುವ ಬದಲಾವಣೆಯನ್ನು ಪ್ರಾಶಸ್ತ್ಯದ  ಮೂಲಕ ಬದಲಿಸಬಹುದು. ಸ್ವಯಂ ನಿಯಂತ್ರಣವನ್ನು ಆಯ್ಕೆ ಮಾಡಿದರೆ ತಂತ್ರಾಂಶವು ಸ್ವಯಂ ನಿಯಂತ್ರಣದಿಂದ ದ್ವಿತ್ವದ ನಿಯಮವನ್ನು ಗುರುತಿಸುವುದು.

ಮೇರು ಪ್ರಸ್ತಾರದ ಮೂಲಕ ಒಂದು ಛಂದಸ್ಸಿನಲ್ಲಿರುವ ವಿವಿಧ ವೃತ್ತಗಳನ್ನು, ಅದರಲ್ಲಿರುವ  ಲಘುಗಳ ಸಂಖ್ಯೆಗಳನ್ನು ಲೆಕ್ಕ ಹಾಕಬಹುದು. 

ಹೊಸ ವೃತ್ತಗಳ ರಚನೆಗೆ ಅನುಕೂಲವಾಗುವಂತೆ ಹೊಸ ವೃತ್ತಗಳು ಎಂಬ ವೈಶಿಷ್ಟ್ಯವನ್ನು ಸೇರಿಸಲಾಗಿದೆ.  ಇದರಿಂದ 13.42 ಕೋಟಿ ಹೊಸ ಬಗೆಯ ವೃತ್ತಗಳನ್ನು ಸೃಷ್ಠಿಸಬಹುದು.

‘ಚೊಕ್ಕಟ’ವನ್ನು ಒತ್ತಿದರೆ ಒಂದು ವಿಶ್ಲೇಷಣೆಯನ್ನು ಅಳಿಸಿ ಹಾಕುವುದು