ಕನ್ನಡ ವ್ಯಾಕರಣ ಹಾಗು ಛಂದಸ್ಸು ಶಾಸ್ತ್ರವನ್ನು ಅಭ್ಯಸಿಸಲು ಅಭಿವೃದ್ಧಿಪಡಿಸಿರುವ ಕವನ ತಂತ್ರಾಂಶವನ್ನು ಉಪಯೋಗಿಸುವ ವಿಧಾನವನ್ನು ಕೆಳಗೆ ವಿವರಿಸಲಾಗಿದೆ.
ಕವನ ತಂತ್ರಾಂಶವನ್ನು ಮೇಲೆ ತೋರಿಸಿರುವ ಭಾಗಗಳನ್ನಾಗಿ ವಿಂಗಡಿಸಲಾಗಿದೆ.

- ಅನುಕ್ರಮಗಳು – ತಂತ್ರಾಂಶವನ್ನು ಬಳಸಲು ಬೇಕಾದ ಆಯ್ಕೆಯನ್ನು ಸುಲಭವಾಗಿ ಉಪಯೋಗಿಸಲು ಅನುಕೂಲವಾಗುವಂತೆ ನಿರ್ಮಿಸಲಾಗಿದೆ. ಕ್ರಮಗಳನ್ನು ಗುಂಪುಗಳಾಗಿ ವಿಂಗಡಿಸಲಾಗಿದೆ
- ಸಂಕೇತ ಪಟ್ಟಿ – ತಂತ್ರಾಂಶದ ಕಾರ್ಯಗಳನ್ನು ನಿರ್ವಹಿಸಲು ಸಂಕೇತಗಳು. ಸಂಕೇತಗಳನ್ನು ವಿಂಗಡಿಸಲು ಸ್ಥಾಯಿ, ವ್ಯಾಕರಣ, ಛಂದಸ್ಸು , ಅಲಂಕಾರ ಹಾಗೂ ಸಂಗೀತ ಎಂಬ ಐದು ಸಂಕೇತ ಪಟ್ಟಿಗಳನ್ನು ನಿರ್ಮಿಸಲಾಗಿದೆ.
- ವೃಕ್ಷ – ಕೃತಿಯನ್ನು ವೃಕ್ಷದ ರೀತಿಯಲ್ಲಿ ಸಂಗಹಿಸುವ ದೃಷ್ಟಿಯಿಂದ ಬಿಡಲಾಗಿದೆ. ಮುಂಬರುವ ಆವೃತ್ತಿಗಳಲ್ಲಿ ಕಾರ್ಯ ನಿರ್ವಹಿಸುವುದು.
- ಹಾಳೆ – ಬರೆಯಲು ಹಾಗು ವಿಶ್ಲೇಷಣೆಗಳಿಗೆ ಬಳಸುವ ಸ್ಥಳ.
- ಪದರಗಳು – ಕೆಲವು ಸಂಕೇತಗಳನ್ನು ಒತ್ತಿದಾಗ, ತಂತ್ರಾಂಶಕ್ಕೆ ಬೇಕಾದ ಆಯ್ಕೆಗಳನ್ನು ಸರಬರಾಜು ಮಾಡುವ ಸಲುವಾಗಿ ಪದರಗಳನ್ನು ನಿರ್ಮಿಸಲಾಗಿದೆ.
- ಸ್ಥಿತಿ ಫಲಕ – ತಂತ್ರಾಂಶವು ನೀಡುವ ಸಂದೇಶಗಳು ಸ್ಥಿತಿ ಫಲಕದಲ್ಲಿ ಮೂಡುವುದು.
ವಿವಿಧ ಸಂಕೇತ ಪಟ್ಟಿಗಳು ಹಾಗೂ ಅವುಗಳ ಕಾರ್ಯಗಳನ್ನು ಕೆಳಗೆ ವಿವರಿಸಲಾಗಿದೆ.
ಸ್ಥಾಯಿ:
ಸ್ಥಾಯಿ ಎಂಬ ಸಂಕೇತ ಪಟ್ಟಿಯಲ್ಲಿ ಕೃತಿಗಳಿಗೆ ಸಂಬಂಧಪಟ್ಟ ನಾಲ್ಕು ಕಾರ್ಯಗಳನ್ನು ನಿರ್ವಹಿಸಬಹುದು. ಇವುಗಳ ಜೊತೆಗೆ ದಪ್ಪ ಅಕ್ಷರ, ಓರೇ ಅಕ್ಷರ ಹಾಗೂ ಅಕ್ಷರದ ಘಾತ್ರಗಳನ್ನೂ ನಿಯಂತ್ರಿಸಬಹುದು.

ವ್ಯಾಕರಣ:
ತಂತ್ರಾಂಶವನ್ನು ಬಳಸುವ ಮೊದಲು ಬೇಕಾದ ಪದ, ವಾಕ್ಯ ಅಥವಾ ಚರಣವನ್ನು , ಬೇಕಾದ ಕ್ರಿಯೆಯನ್ನು ಆಯ್ಕೆ ಮಾಡಿ.

ಸಂಧಿ:
ಎರಡು ಪದಗಳ ಸಂಧಿ ಮಾಡಲು, ಮೊದಲಿಗೆ ಎರಡು ಪದಗಳನ್ನು ಆಯ್ಕೆ ಮಾಡಿ ನಂತರ ಸಂಧಿ ಕ್ರಿಯಾಗುಂಡಿಯನ್ನು ಒತ್ತಿರಿ.
ಉದಾಹರಣೆ:
ಹಣದ + ಆಸೆ
(ಇಲ್ಲಿ ಎರಡು ಪದಗಳ ನಡುವೆ + ಚಿಹ್ನೆ ಇರುವ ಅಗತ್ಯವಿಲ್ಲ. ಇದ್ದರೂ ತೊಂದರೆಯಿಲ್ಲ.) ಆಯ್ಕೆ ಮಾಡಿ ಸಂಧಿ ಕ್ರಿಯಾಗುಂಡಿಯನ್ನು ಒತ್ತಿದಾಗ ಕೆಳಗಿನ ಮಾಹಿತಿ ಮೂಡುವುದು

ಕನ್ನಡದಾಗಿದ್ದಲ್ಲಿ ‘ಕನ್ನಡ’ವನ್ನು ಆಯ್ಕೆ ಮಾಡಿ. ಯಾವುದಾದರು ಒಂದು ಪದ ಸಂಸ್ಕೃತವಾಗಿದ್ದಲ್ಲಿ ‘ಸಂಕೃತ’ವನ್ನು ಆಯ್ಕೆ ಮಾಡಿ.
ಕನ್ನಡ ಸಂಧಿಯಾಗಿದ್ದಲ್ಲಿ ಲೋಪ ಮತ್ತು ಆಗಮ ಸಂಧಿಗಳ ಸಮಸ್ಯೆಯನ್ನು ಬಗೆಹರಿಸಲು ಕೆಳಗೆ ತೋರಿಸಿದ ಮತ್ತೊಂದು ಮಾಹಿತಿ ಮೂಡುವುದು.

ಸರಿಯಾದ ಆಯ್ಕೆ ಮಾಡಿ ಹೌದು ಎಂದು ಆಯ್ಕೆ ಮಾಡಿದಾಗ ‘ಹಣದಾಸೆ [ಲೋಪ ಸಂಧಿ]’ ಎಂದು ಉತ್ತರವು ಬರುವುದು.
ಸೂಚನೆ:
ಕೆರೆ + ಅನ್ನು, ಇದನ್ನು ಸಂಧಿ ಮಾಡುವಾಗ ಕೆಳಕಂಡ ಮಾಹಿತಿ ಮೂಡುವುದು.

ಇಲ್ಲಿ ‘ಇಲ್ಲ’ ಎಂದು ಆಯ್ಕೆ ಮಾಡಿದಾಗ ಬೇಕಾದ ಉತ್ತರ ಸಿಗುವುದು –>ಕೆರೆಯನ್ನು [ಯ ಕಾರ ಆಗಮ ಸಂಧಿ]
ವಿಸ್ತಾರ:
ಒಂದು ಸಂಯುಕ್ತ ಪದವನ್ನು ವಿಸ್ತರಿಸಲು, ಪದವನ್ನು ಆಯ್ಕೆ ಮಾಡಿ ನಂತರ ‘ವಿಸ್ತಾರ’ ಎಂಬ ಕ್ರಿಯಾಗುಂಡಿಯನ್ನು ಒತ್ತಬೇಕು.
‘ಶುಭಾಶಯ’ ಎಂಬ ಪದವನ್ನು ವಿಸ್ತರಿಸಿದಾಗ ‘ಶುಭ ಆಶಯ’ ಎಂದು ಬದಲಾಗುವುದು

ತತ್ಸಮ:
ಕನ್ನಡ ಪದದ ಮೂಲ ಪದವನ್ನು ಪಡೆಯಲು, ಪದವನ್ನು ಆಯ್ಕೆ ಮಾಡಿ ನಂತರ ‘ತತ್ಸಮ’ ಎಂಬ ಕ್ರಿಯಾಗುಂಡಿಯನ್ನು ಒತ್ತಬೇಕು. ಸಂಸ್ಕೃತ ಅಥವಾ ಹೇಳೆಗನ್ನಡದ ಮೂಲಪದಗಳಿದ್ದಲ್ಲಿ, ಪದವು ಸಂಸ್ಕೃತ ಅಥವಾ ಹೇಳೆಗನ್ನಡದ ಪದಗಳಾಗಿ ಬದಲಾಗುವುದು.
ತದ್ಭವ:
ಸಂಸ್ಕೃತ ಅಥವಾ ಹೇಳೆಗನ್ನಡದ ಮೂಲಪದಗಳಿಂದ ಕನ್ನಡ ಪದವನ್ನು ಪಡೆಯಲು, ಪದವನ್ನು ಆಯ್ಕೆ ಮಾಡಿ ನಂತರ ‘ತದ್ಭವ’ ಎಂಬ ಕ್ರಿಯಾಗುಂಡಿಯನ್ನು ಒತ್ತಬೇಕು. ಪದವು ಕನ್ನಡದ ಪದವಾಗಿ ಬದಲಾಗುವುದು.
ಕಾಗುಣಿತ:
ವ್ಯಾಕರಣ ಎಂಬ ಅನುಕ್ರಮದಲ್ಲಿ ‘ಕಾಗುಣಿತ’ ವನ್ನು ಆಯ್ಕೆ ಮಾಡಿದಾಗ, ಹಾಲೆಯಲ್ಲಿರುವ ಪದಗಳ ಕಾಗುಣಿತವನ್ನು ಪರೀಕ್ಷಿಸಬಹುದು. ಪರ್ಯಾಯವಾಗಿ ಕೀಲಿಮಣೆಯ F7 ನ್ನು ಬಳಸಬಹುದು. ಕಾಗುಣಿತವನ್ನು ಪರಿಶೀಲಿಸಿದಾಗ ಇದು ಹಾಲೆಯಲ್ಲಿರುವ ಪದಗಳನ್ನು ಶಬ್ದಕೋಶದಲ್ಲಿರುವ ಪದಗಳ ಜೊತೆಗೆ ಹೋಲಿಸಿ ಪದಗಳು ತಪ್ಪಾಗಿದ್ದಲ್ಲಿ, ಪದದ ಕೆಳಗೆ ಕೆಂಪು ಗೆರೆಯನ್ನು ಹಾಕುವುದು. ಸದ್ಯಕ್ಕೆ ಶಬ್ದಕೋಶದಲ್ಲಿ ಹೆಚ್ಚಿನ ಪದಗಳಿಲ್ಲ, ಆದುದರಿಂದ ಕೆಲವು ಸರಿಯಾದ ಪದಗಳು ಕೂಡ ತಪ್ಪೆಂದು ತೋರಿಸುವ ಸಾಧ್ಯತೆ ಇರುತ್ತದೆ. ಸರಿಯಾದ ಪದದ ಮೇಲೆ ಮೂಷಿಕದ ಬಲ ಗುಂಡಿಯನ್ನು ಒತ್ತಿದರೆ ಪದವನ್ನು ಶಬ್ದಕೋಶಕ್ಕೆ ಸೇರಿಸುವ ಆಯ್ಕೆ ಮೂಡುವುದು.
ಶುಭ್ರ :
ಕಾಗುಣಿತವನ್ನು ಪರೀಕ್ಷಿಸಿದಾಗ ಬರುವ ಕೆಂಪು ಅಥವಾ ನೀಲಿ ಗೆರೆಗಳನ್ನು ಹಾಳೆಯಿಂದ ಮರೆಮಾಡಲು ಶುಭ್ರ ಅಥವಾ ಕೀಲಿಮಣೆಯ F3 ಯನ್ನು ಬಳಸಬಹುದು.
ಸಲಹೆಗಳು:
ಕಾಗುಣಿತ ಪರೀಕ್ಷಿಸಿದಾದ ಬರುವ ಕೆಂಪು ಗೆರೆಗಳ ಮೇಲೆ ಮೂಷಿಕದ ಬಲ ಗುಂಡಿಯನ್ನು ಒತ್ತಿದರೆ ಸರಿಯಾದ ಪದಗಳ ಸಲಹೆ ಪಟ್ಟಿ ಮೂಡುವುದು. ಇದನ್ನು ಪರಿಶೀಲಿಸಿ ಸರಿಯಾದ ಪದದ ಆಯ್ಕೆ ಮಾಡಬಹುದು.
ಛಂದಸ್ಸು:

ಪ್ರಸ್ತಾರ:
ಛಂದಸ್ಸನ್ನು ಗುರುತಿಸಲು, ಒಂದು ಪದ್ಯದ ಚರಣವನ್ನು ಆಯ್ಕೆ ಮಾಡಿ ‘ ಪ್ರಸ್ತಾರ ‘ ಎಂಬ ಸಂಕೇತವನ್ನು ಒತ್ತಬೇಕು.
ಉದಾಹರಣೆ:
ಕುಳಿರ್ವ ಪೂಗೊಳಂಗಳಲ್ಲಿ
ತಳಿರಕಾವಣಂಗಳಲ್ಲಿ
ತುಂಬಿವಿಂಡಿನಂತೆಪಾಡಿ
ಜಕ್ಕವಕ್ಕಿಯಂತೆಕೂಡಿ
ಮೇಲಿನ ಚರಣವನ್ನು ಆಯ್ಕೆ ಮಾಡಿ ‘ಪ್ರಸ್ತಾರ’ವನ್ನು ಒತ್ತಿದಾಗ ಲಘು ಗುರು ಹಾಗೂ ಗಣದ ಗುಂಪನ್ನು ಮಾಡಿ ಛಂದಸ್ಸನ್ನು ಗುರುತಿಸುವುದು ನಂತರ ಕೆಳಕಂಡ ವಿಶ್ಲೇಷಣೆ ಬರುವುದು
===============ವಿಶ್ಲೇಷಣೆ========================
[ಉತ್ಸಾಹ ರಗಳೆ]
∪ ∪ ∪ |_ ∪ |_ ∪ |_ ∪ (12 ಮಾತ್ರೆಗಳು/9 ಅಕ್ಷರಗಳು)
ಕುಳಿರ್ವ |ಪೂಗೊ|ಳಂಗ|ಳಲ್ಲಿ
∪ ∪ ∪|_ ∪|_ ∪|_ ∪ (12 ಮಾತ್ರೆಗಳು/9 ಅಕ್ಷರಗಳು)
ತಳಿರ|ಕಾವ|ಣಂಗ|ಳಲ್ಲಿ
_ ∪|_ ∪|_ ∪|_ ∪ (12 ಮಾತ್ರೆಗಳು/8 ಅಕ್ಷರಗಳು)
ತುಂಬಿ|ವಿಂಡಿ|ನಂತೆ|ಪಾಡಿ
_ ∪|_ ∪|_ ∪|_ ∪ (12 ಮಾತ್ರೆಗಳು/8 ಅಕ್ಷರಗಳು)
ಜಕ್ಕ|ವಕ್ಕಿ|ಯಂತೆ|ಕೂಡಿ
ಆದಿಪ್ರಾಸ : –
ಅಂತ್ಯಪ್ರಾಸ : –
==============ವಿಶ್ಲೇಷಣೆ ಮುಕ್ತಾಯ===================
ಪ್ರಾಸ:ಪ್ರಾಸವನ್ನು ಗುರುತಿಸಲು, ಒಂದು ಪದ್ಯದ ಚರಣವನ್ನು ಆಯ್ಕೆ ಮಾಡಿ ‘ ಪ್ರಾಸ’ ಎಂಬ ಕ್ರಿಯಾಗುಂಡಿಯನ್ನು ಒತ್ತಿರಿ.
ಉದಾಹರಣೆ:
ತಡದಿ ಬರುವನೇನೇ ? ಕೇಳದಿದ್ದಷ್ಟು ನೀನೂ
ಕುಡಿದುಬರುವ ಕಾಣೇ! ಮಾತನಾಡ್ದಿದ್ರೆ ಮತ್ತೇ
ಮಡದಿಯೆನುವುದನ್ನೇ ಮರ್ತು ಬಿಡ್ತಾನೆ ಕೇಳೇ
ಹೊಡೆದುಬಡೆದು ಮಾಡೀ ಮೂಲೆಗೇ ತಳ್ಳುತಾನೇ! ||೧||
ಮೇಲಿನ ಚರಣವನ್ನು ಆಯ್ಕೆ ಮಾಡಿ ‘ಪ್ರಾಸ’ವನ್ನು ಒತ್ತಿದಾಗ ಕೆಳಕಂಡ ವಿಶ್ಲೇಷಣೆ ಬರುವುದು
==============ವಿಶ್ಲೇಷಣೆ============================
ಆದಿಪ್ರಾಸ : ಡ –> ಗಜಪ್ರಾಸ
ಅಂತ್ಯಪ್ರಾಸ : –
==============ವಿಶ್ಲೇಷಣೆ ಮುಕ್ತಾಯ===================
ವೈದಿಕ ಪ್ರಸ್ತಾರವನ್ನು ಇದೇ ಮಾದರಿಯಲ್ಲಿ ಉಪಯೋಗಿಸಬೇಕು.
ಮೇರು ಪ್ರಸ್ತಾರದ ಮೂಲಕ ಒಂದು ಛಂದಸ್ಸಿನಲ್ಲಿರುವ ವಿವಿಧ ವೃತ್ತಗಳನ್ನು, ಅದರಲ್ಲಿರುವ ಲಘುಗಳ ಸಂಖ್ಯೆಗಳನ್ನು ಲೆಕ್ಕ ಹಾಕಬಹುದು.
ಹೊಸ ವೃತ್ತಗಳ ರಚನೆಗೆ ಅನುಕೂಲವಾಗುವಂತೆ ‘ಹೊಸ ವೃತ್ತ’ ಎಂಬ ವೈಶಿಷ್ಟ್ಯವನ್ನು ಸೇರಿಸಲಾಗಿದೆ. ಇದರಿಂದ 13.42 ಕೋಟಿ ಹೊಸ ಬಗೆಯ ವೃತ್ತಗಳನ್ನು ಸೃಷ್ಠಿಸಬಹುದು.
‘ಪ್ರಸ್ತಾರ ಪ್ರತ್ಯಯ’ದ ಮೂಲಕ ಎಲ್ಲಾ ವರ್ಣವೃತ್ತಗಳ ಲಕ್ಷಣಗಳನ್ನು ಬರೆದು ಸಂಗ್ರಹಿಸಬಹುದು.
‘ಚೊಕ್ಕಟ’ವನ್ನು ಒತ್ತಿದರೆ ಒಂದು ವಿಶ್ಲೇಷಣೆಯನ್ನು ಅಳಿಸಿ ಹಾಕುವುದು.
‘ಸ್ವರಚನೆ’ಯ ಮೂಲಕ ಛಂದಸ್ಸುಗಳನ್ನು ಸ್ವಯಂ ಸೃಷ್ಟಿ ಮಾಡಬಹುದು. ಇದರ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ‘ಸ್ವರಚನೆ’ಯನ್ನು ಬಳಸಲು SQLite ನ ಅವಶ್ಯಕತೆ ಇದೆ.
ಸ್ವರಚಿತ ಛಂದಸ್ಸು:
ಛಂದಸ್ಸು ಸಂಕೇತ ಪಟ್ಟಿಯಲ್ಲಿ ಸ್ವರಚನೆ ಎಂಬ ಸಂಕೇತವನ್ನು ಒತ್ತಿದಾಗ ಬಲಭಾಗದ ಪರದೆಯಲ್ಲಿ ಸ್ವರಚಿತ ಛಂದಸ್ಸು ಎಂಬ ಪದರವು ಮೂಡುವುದು.
- ಹೊಸ ಛಂದಸ್ಸನ್ನು ಸೃಷ್ಟಿಸಲು, ಮೊದಲಿಗೆ ಛಂದಸ್ಸಿನ ಮಾದರಿಯನ್ನು (ವರ್ಣ, ಮಾತ್ರಾ, ಅಂಶ, ಮಿಶ್ರ) ಆಯ್ಕೆ ಮಾಡಿ, ನಂತರ ಛಂದಸ್ಸಿಗೆ ಬೇಕಾದ ಹೆಸರನ್ನು ನೀಡಬೇಕು. ಛಂದಸ್ಸಿನ ಹೆಸರು ಕನ್ನಡ ಅಕ್ಷರಗಳಲ್ಲೇ ಇರಬೇಕು.
- ನಂತರ ಗಣ, ವೈಶಿಷ್ಟ್ಯ ಹಾಗೂ ಯತಿನಿಯಮಗಳನ್ನು ನೀಡಬೇಕು.
- ಇದಕ್ಕೆ ಅನುಕೂಲವಾಗುವಂತೆ ಕೆಳಗಿರುವ ಒತ್ತುಗೆಗಳನ್ನು ನೀಡಲಾಗಿದೆ
- ನಿರ್ಯಾತದ ಮೂಲಕ ರಚಿಸಿದ ಮಾದರಿಯನ್ನು ರಫ್ತು ಮಾಡಿ ಪರಿಶೀಲಿಸಬಹುದು. ಸಂಪೂರ್ಣ ಕಣಜವನ್ನು ಪರಿಶೀಲಿಸಲು DB Browser for SQLite ನ್ನು ಅನುಸ್ಥಾಪಿಸಿ ಪರಿಶೀಲಿಸಬಹುದು.
- ಛಂದಸ್ಸನ್ನು ಕಣಜಕ್ಕೆ ದಾಖಲಿಸಿದರೆ, ‘ಪ್ರಸ್ತಾರ’ಕ್ಕೆ ಲಕ್ಷಣಗಳು ಲಭ್ಯವಾಗುವುದು

ಸ್ವರಚಿತ ಛಂದಸ್ಸಿನ ಲಕ್ಷಣಗಳನ್ನು ವಿನ್ಯಾಸಗೊಳಿಸುವ ಪದರದ ವಿವರಗಳನ್ನು ಪಕ್ಕದಲ್ಲಿ ಕಾಣಬಹುದು.

ಅಲಂಕಾರ:
ಅಲಂಕಾರದಲ್ಲಿ ಯಮಕ, ಏಕಾಕ್ಷರಿ, ದ್ವಯಕ್ಷರಿ, ತ್ರಯಕ್ಷರಿಗಳನ್ನು ಗುರುತಿಸಬಹುದು

ಸಂಗೀತ

ಸಂಗೀತ ಎಂಬ ಸಂಕೇತ ಪಟ್ಟಿಯಲ್ಲಿ ಸಂಗೀತಕ್ಕೆ ಸಂಬಂಧಪಟ್ಟ ನಾಲ್ಕು ಕಾರ್ಯಗಳನ್ನು ನಿರ್ವಹಿಸಬಹುದು. ಅವುಗಳೆಂದರೆ
ರಾಗ : ಸಂಗೀತದ ಆರೋಹಣ ಹಾಗೂ ಅವರೋಹಣಗಳನ್ನು ಆಯ್ಕೆ ಮಾಡಿ ಅದನ್ನು ನುಡಿಸಬಹುದುತಾಳ: ಸಾಹಿತ್ಯವನ್ನು ತಾಳಕ್ಕೆ ಹೊಂದಿಸಿ ವಿಂಗಡಣೆ ಮಾಡಲು ಇದು ಉಪಯೋಗವಾಗಲಿದೆ. ಕೆಲವು ನ್ಯೂನತೆಗಳು ಇರುವುದರಿಂದ ಇದನ್ನು ಇನ್ನೂ ಬಿಡುಗಡೆಗೊಳಿಸಿಲ್ಲ.ನುಡಿ: ಸಂಗೀತದ ಸ್ವರಗಳ ಸರಣಿಯನ್ನು ನುಡಿಸಲು ಇದನ್ನು ಬಳಸಬಹುದು. ಉದಾಹರಣೆಗೆ ಸರಳ ವರಸೆಗಳನ್ನು ಹಾಗೂ ಸಂಚಾರಿ ಗೀತೆಗಳನ್ನು ನುಡಿಸಲು ಬಳಸಬಹುದುಸಂಯೋಜನೆ: ಸ್ವರಗಳನ್ನು ಬಳಸಿ ಸಂಗೀತ ರಚನೆ ಮಾಡಲು ಅನುಕೂಲವಾಗುವಂತೆ ಸ್ವರಾಕ್ಷರಗಳನ್ನು ಸಂಕೇತ ರೂಪದಲ್ಲಿ ನೀಡಲಾಗಿದೆ
ಕೆಲವು ಸಂಗೀತ ಸ್ವರಾಕ್ಷರಗಳು ಯೂನಿಕೋಡ್ ನಲ್ಲಿ ಇಲ್ಲದಿರುವುದರಿಂದ ಪರ್ಯಾಯ ಅಕ್ಷರಗಳನ್ನು ಅಳವಡಿಸಲಾಗಿದೆ.
ರಾಗ :
ಸಂಗೀತದ ಸಂಕೇತ ಪಟ್ಟಿಯಲ್ಲಿ ರಾಗ ಎಂಬ ಸಂಕೇತವನ್ನು ಒತ್ತಿದಾಗ ಬಲ ಗಣಕದ ಪರದೆಯ ಬಾಗದಲ್ಲಿ ರಾಗ ಎಂಬ ಪದರವು ಮೂಡುವುದು. ಚಕ್ರ, ಮೇಳ ಹಾಗು ಜನ್ಯಗಳನ್ನು ಆಯ್ಕೆ ಮಾಡಿದರೆ, ರಾಗಕ್ಕೆ ಸಂಬಂಧಪಟ್ಟ ಆರೋಹಣ ಹಾಗೂ ಅವರೋಹಣಗಳು ಮೂಡುವುವು.
ಬೇಕಾದ ಶ್ರುತಿ ಹಾಗು ಲಯವನ್ನು ಆಯ್ಕೆ ಮಾಡಿ ರಾಗದ ಆರೋಹಣ ಹಾಗೂ ಅವರೋಹಣಗಳನ್ನು ‘ನುಡಿ’ ಸ ಬಹುದು.
ಸಾರಾಂಶವನ್ನು ಒತ್ತಿದರೆ ಆರೋಹಣ ಹಾಗೂ ಅವರೋಹಣ ಗಳು ಹಾಳೆಯ ಮೇಲೆ ಮೂಡುವುದು. ಇದು ‘ನುಡಿ ‘ ಸಂಕೇತಪಟ್ಟಿಯಲ್ಲಿ ಬರುವ ‘ನುಡಿ’ ಸಂಕೇತವನ್ನು ಒತ್ತಿದಾಗ ಬರುವ ಪದರದಲ್ಲಿ ಬಳಸಲು ಅನುಕೂಲವಾಗುತ್ತದೆ.
ನುಡಿ :
‘ನುಡಿ ‘ ಸಂಕೇತವನ್ನು ಒತ್ತಿದಾಗ ಬರುವ ಪದರದಿಂದ ಸಂಗೀತವನ್ನು ನುಡಿಸಬಹುದು.
ಸಂಯೋಜಿಸಿದ ಸ್ವರಗಳನ್ನು ಬಿಳಿಯ ಚೌಕದಲ್ಲಿ ಬರೆದು, ಬೇಕಾದ ಶ್ರುತಿ ಹಾಗು ಲಯವನ್ನು ಆಯ್ಕೆ ಮಾಡಿ, ರಾಗದ ಆರೋಹಣ ಹಾಗೂ ಅವರೋಹಣಗಳನ್ನು ನೀಡಿದರೆ, ಸ್ವರಗಳ ಆರೋಹಣ ಹಾಗೂ ಅವರೋಹಣಗಳನ್ನು ಸ್ವಯಂ ಬದಲಿಸಿ ನುಡಿಸುವುದು.

ಪ್ರಾಶಸ್ತ್ಯಗಳು
ಲಕ್ಷಣ -> ಪ್ರಾಶಸ್ತ್ಯ
ಶಿಥಿಲದ್ವಿತ್ವ ವ್ಯಂಜನಗಳ ಆಯ್ಕೆಯನ್ನು ಪ್ರಾಶಸ್ತ್ಯ ಮೂಲಕ ಬದಲಿಸಬಹುದು
ಇದೆ ಉತ್ತರ ಪದದ ಆದ್ಯಾಕ್ಷರ ದ್ವಿತ್ವವಾಗಿದ್ದಲ್ಲಿ, ಇದು ಪೂರ್ವ ಪದದ ಅಂತ್ಯಾಕ್ಷರದ ಕಾಲ ಮಾತ್ರೆಯಲ್ಲಿ ಮಾಡುವ ಬದಲಾವಣೆಯನ್ನು ಪ್ರಾಶಸ್ತ್ಯದ ಮೂಲಕ ಬದಲಿಸಬಹುದು. ಸ್ವಯಂ ನಿಯಂತ್ರಣವನ್ನು ಆಯ್ಕೆ ಮಾಡಿದರೆ ತಂತ್ರಾಂಶವು ಸ್ವಯಂ ನಿಯಂತ್ರಣದಿಂದ ದ್ವಿತ್ವದ ನಿಯಮವನ್ನು ಗುರುತಿಸುವುದು.